ಗ್ಯಾಲ್ವನೀ, ಲ್ವಿಗಿ -
1737-1798. ಇಟಲಿ ದೇಶದ ದೇಹ ಹಾಗೂ ಅಂಗ ರಚನಾವಿಜ್ಞಾನಿ. ಜನನ ಬೊಲೋನದಲ್ಲಿ 1737ರ ಸೆಪ್ಟೆಂಬರ್ 9ರಂದು. ಗ್ಯಾಲಿಯಾನ್ಸಿ ಎಂಬ ವೈದ್ಯನಲ್ಲಿ ವೈದ್ಯವಿಜ್ಞಾನವನ್ನು ಅಭ್ಯಸಿಸಿ ಆತನ ಮಗಳನ್ನೇ ಮದುವೆಯಾದ. ಸ್ಥಳೀಯ ವಿಶ್ವವಿದ್ಯಾಲಯದಲ್ಲಿ ಅಂಗರಚನಾಶಾಸ್ತ್ರದ ಪ್ರಾಧ್ಯಾಪಕನಾಗಿ 1797ರ ವರೆಗೆ ಸೇವೆ ಸಲ್ಲಿಸಿದ. ಈತ ಪ್ರಸಿದ್ಧಿ ಪಡೆದದ್ದು ಶಸ್ತ್ರವೈದ್ಯದಲ್ಲಿ ಮತ್ತು ಪಕ್ಷಿಗಳನ್ನು ಕುರಿತಂತೆ ಶ್ರವಣಾಂಗ, ಜನನಾಂಗ ಹಾಗೂ ಮೂತ್ರಾಂಗಗಳ ತೌಲನಿಕ ಅಂಗರಚನಾಶಾಸ್ತ್ರದಲ್ಲಿ. ದೇಹದಿಂದ ಬೇರ್ಪಡಿಸಲ್ಪಟ್ಟ ಕಪ್ಪೆಯ ಕಾಲುಗಳಿಗೆ ವಿದ್ಯುದಾವಿಷ್ಟ ಚಾಕನ್ನು ಮುಟ್ಟಿಸಿದಾಗ ಅವು ಅಲುಗಾಡುತ್ತವೆ ಎಂಬ ಅಂಶವನ್ನು ಗ್ಯಾಲ್ವಾನಿಯ ಗಮನಕ್ಕೆ ಅವನ ಪತ್ನಿ ತಂದಿದ್ದಳು (1770). ಪ್ರಯೋಗಕ್ಕಾಗಿ ಕಪ್ಪೆಗಳನ್ನು ಕಬ್ಬಿಣದ ಕಂಬಿಗಳ ಮೇಲೆ ತಾಮ್ರದ ಕೊಕ್ಕೆಗಳಿಂದ ನೇತುಹಾಕಿರುವ ರೂಢಿ ಇತ್ತಷ್ಟೆ. ಗಾಳಿಯಿಂದ ಇವು ಅಲುಗಾಡಿ ತಾಮ್ರ ಮತ್ತು ಕಬ್ಬಿಣ ಪದಾರ್ಥಗಳು ಸ್ಪರ್ಶಗೊಂಡಾಗಲೆಲ್ಲ ಕಪ್ಪೆಯ ಕಾಲುಗಳು ಸೆಟೆದುಕೊಳ್ಳುವುದನ್ನು ಗ್ಯಾಲ್ವಾನಿ ಗಮನಿಸಿದ (1786). ಇದು ಕಪ್ಪೆಯ ದೇಹದಲ್ಲಿನ ಧನವಿದ್ಯುದಾವೇಶವನ್ನು ಲೋಹದ ತಂತಿಯಿಂದ ಋಣವಿದ್ಯುದಾವೇಶಕ್ಕೆ ಸಂಪರ್ಕಿಸಿದಾಗ ಉಂಟಾಗುವ ವಿದ್ಯುತ್ ಪ್ರವಾಹದ ಪ್ರಭಾವ ಎಂದು ಗ್ಯಾಲ್ವಾನಿ ತರ್ಕಿಸಿದ. ದೇಹಜನಿತವಾದ ಇಂಥ ವಿದ್ಯುತ್‍ಪ್ರವಾಹಗಳಿಂದ ಚಲನೆ ಉಂಟಾಗುತ್ತದೆಂಬುದನ್ನು ಪುಷ್ಟೀಕರಿಸಲು ಎರಡು ಅರ್ಧಗಳೂ ಬೇರೆ ಬೇರೆ ಲೋಹಗಳಿಂದ ಮಾಡಲ್ಪಟ್ಟ ಒಂದು ಕಮಾನನ್ನು ಗ್ಯಾಲ್ವಾನಿ ತಯಾರಿಸಿದ. ಇದರ ಒಂದು ತುದಿಯಿಂದ ಕಪ್ಪೆಯ ಕಾಲಿನ ಸ್ನಾಯುವನ್ನೂ ಇನ್ನೊಂದು ತುದಿಯಿಂದ ಆ ಸ್ನಾಯುವನ್ನು ಹೋಗುವ ನರವನ್ನೂ ಸಂಪರ್ಕಿಸಿದರೆ ಧನಾವೇಶವಿರುವ ಸ್ನಾಯುವಿನ ಹೊರಭಾಗದಿಂದ ಋಣಾವೇಶವಿರುವ ಸ್ನಾಯುವಿನ ಒಳಭಾಗಕ್ಕೆ ನರದ ಮೂಲಕ ವಿದ್ಯುತ್‍ಪ್ರವಾಹ ಹರಿದು ಅದರ ಫಲವಾಗಿಯೇ ಸ್ನಾಯು ಸೆಟೆಯುವುದೆಂದು ವಿವರಿಸಿದ. ಆದರೆ ದೇಹಜನಿತ ವಿದ್ಯುತ್ತನ್ನು ಈ ಪ್ರಯೋಗದಿಂದ ತೋರಿಸಿಕೊಟ್ಟಂತಾಯಿತೆಂಬ ಅವನ ತೀರ್ಮಾನ ಮಾತ್ರ ತಪ್ಪು. ದೇಹಜನಿತ ವಿದ್ಯುತ್ತಿನ ವಿಷಯವನ್ನು ಗ್ಯಾಲ್ವಾನಿ ತನ್ನ ಪುಸ್ತಕದಲ್ಲಿ ಪ್ರಕಟಿಸಿದಾಗ (1791) ಇಟಲಿಯ ಇನ್ನೊಬ್ಬ ಪ್ರಸಿದ್ಧ ಶಾಸ್ತ್ರಜ್ಞನಾದ ಅಲ್ಲೆಸ್ಸಾಂಡ್ರೋ ವೋಲ್ಟ ಎಂಬಾತ ಅದನ್ನು ಪ್ರಬಲವಾಗಿ ವಿರೋಧಿಸಿದ. ಬೇರೆ ಬೇರೆ ಲೋಹಗಳು ಸಂಪರ್ಕಿಸಲ್ಪಟ್ಟಾಗ ವಿದ್ಯುತ್ತು ಜನಿಸುವುದೆಂದೂ ಆ ವಿದ್ಯುತ್ತೇ ಕಪ್ಪೆಯ ಸ್ನಾಯುವಿನ ಸೆಟೆತಕ್ಕೆ ಕಾರಣವೆಂದೂ ಆತ ವಾದಿಸಿದ. ಆದರೆ ದೇಹಜನಿತ ವಿದ್ಯುತ್ತು ಇಲ್ಲವೆಂಬ ವೋಲ್ಟನ ಸೂಚನೆಯೂ ಸರಿಯಲ್ಲ. ಈ ವಿವಾದ ಇವರಿಬ್ಬರು ವಿಜ್ಞಾನಿಗಳಲ್ಲಿ ಬಹು ಕಟುವಾಗಿ ಉದ್ರೇಕಗೊಂಡಿತಾದರೂ ಇದರ ಪರಿಣಾಮವಾಗಿ ದೇಹಜನಿತ ವಿದ್ಯುತ್ತನ್ನು ಕುರಿತ ತೀವ್ರಾಭ್ಯಾಸಕ್ಕೆ ಇದು ನಾಂದಿಯಾಯಿತು. ವಿದ್ಯುದ್ವಿಜ್ಞಾನದಲ್ಲಿ ಅನೇಕ ಪದಗಳು ಗ್ಯಾಲ್ವಾನಿಯ ಗೌರವಾರ್ಥವಾಗಿ ಅಂಕಿತವಾಗಿವೆ. ದೇಹವಿಜ್ಞಾನದಲ್ಲೂ ಗ್ಯಾಲ್ವಾನಿಸಮ್ ಎಂಬ ಪದಪ್ರಯೋಗ ಉಂಟು.

ಗ್ಯಾಲ್ವಾನಿ ರಾಜವಾದಿಯಾಗಿದ್ದ. ಅವನಿದ್ದ ಇಟಲಿಯ ಭಾಗ 1797ರಲ್ಲಿ ಪ್ರಜಾರಾಜ್ಯವೆಂದು ಸಾರಲ್ಪಟ್ಟಾಗ ಅದಕ್ಕೆ ತನ್ನ ನಿಷ್ಠೆಯನ್ನು ತೋರಲು ಒಪ್ಪಲಿಲ್ಲವಾಗಿ ಕೆಲಸ ಕಳೆದುಕೊಂಡ. 1798ರ ಡಿಸೆಂಬರ್ 4ರಂದು ಬೊಲೋನ ನಗರದಲ್ಲೆ ಕಾಲವಾದ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ